ವಜ್ರ - 
	ಶುದ್ಧ ಕಾರ್ಬನಿನ ಸ್ಫಟಿಕೀಯ ಭಿನ್ನರೂಪಿ ಪದಾರ್ಥಗಳ ಪೈಕಿ ಅತಿ ಕಠಿಣವಾದದ್ದು,ಅಮೂಲ್ಯ ರತ್ನಶಿಲೆ (ಡೈಮಂಡ್). ಅಜೇಯ ಎಂಬ ಅರ್ಥದ ಲ್ಯಾಟಿನ್ ಪದ ಆ್ಯಡಮಸ್‍ನಿಂದ ಇಂಗ್ಲಿಷ್ ಪದದ ವ್ಯುತ್ಪನ್ನ.

	ವಜ್ರದ ವಿಶಿಷ್ಟ ಗುಣಗಳಿಗೆ ಅದರ ವಿಶಿಷ್ಟ ಸ್ಫಟಿಕೀಯ ಸಂರಚನೆಯೇ ಕಾರಣ. ವಜ್ರದ ಸ್ಫಟಿಕದಲ್ಲಿ ಪ್ರತಿಯೊಂದು ಕಾರ್ಬನ್ ಪರಮಾಣು ತನ್ನ 4 ಎಲೆಕ್ಟ್ರಾನುಗಳನ್ನು ಪಕ್ಕದ ಕಾರ್ಬನ್ ಪರಮಾಣುಗಳೊಂದಿಗೆ ಹಂಚಿಕೊಂಡು (ಅರ್ಥಾತ್, ಸಹವೇಲೆನ್ಸೀಯ ಬಂಧಗಳನ್ನು ರೂಪಿಸಿ ಕೊಂಡು) ಚತುಷ್ಫಲಕ (ಟೆಟ್ರಹೇಡ್ರಲ್) ಘಟಕಗಳನ್ನು ರೂಪಿಸುತ್ತವೆ. ವಜ್ರದ ಪುನರಾವರ್ತನೆಯಾಗುವ ಸಂರಚನ ಘಟಕಗಳಲ್ಲಿ ಮೂಲತಃ ಘನಾಕೃತಿಯಲ್ಲಿ ಜೋಡಣೆಯಾಗಿರುವ 8 ಪರಮಾಣುಗಳು ಇರುತ್ತವೆ. ಈ ಘನರೂಪ ಮತ್ತು ಪರಮಾಣುಗಳ ಸಮ್ಮಿತೀಯ ಜೋಡಣೆಯ ನೆರವಿನಿಂದ ವಿಭಿನ್ನ ಆಕಾರದ ವಜ್ರಗಳು ರೂಪುಗೊಳ್ಳುತ್ತವೆ. ಈ ಆಕಾರಗಳಿಗೆ ಕ್ರಿಸ್ಟಲ್ ಹೇಬಿಟ್ಸ್ ಎಂದು ಹೆಸರು. ವಜ್ರಾಕೃತಿ ಎಂದೇ ಚಿರಪರಿಚಿತವಾಗಿರುವ ಅಷ್ಟಫಲಕ ಆಕಾರವಲ್ಲದೆ ಘನ, ದ್ವಾದಶಫಲಕ ಅಥವಾ ಇವುಗಳ ಯಾವುದೇ ಸಂಯೋಜನೆಯ ಆಕಾರಗಳಲ್ಲೂ ಲಭ್ಯ. ಸಂಕೀರ್ಣ, ಕೊರೆದ, ದುಂಡು ಅಥವಾ ಲಂಬಿಸಿದ (ಇಲಾಂಗೇಟೆಡ್) ಮೇಲ್ಮೈಯ ವಜ್ರಗಳೂ ಇವೆ.

	ಲಭ್ಯವಿರುವ ಪದಾರ್ಥಗಳ ಪೈಕಿ ಅತ್ಯಂತ ಕಠಿಣವಾದದ್ದು ವಜ್ರ. ಎಂದೇ, ಒಂದು ವಜ್ರವನ್ನು ಇನ್ನೊಂದು ವಜ್ರದಿಂದ ಮಾತ್ರ ಗೀರಬಹುದು. ಮೋ ಕಾಠಿಣ್ಯ ಮಾನಕದಲ್ಲಿ ಇದರ ಕಾಠಿಣ್ಯಾಂಕ 10. ಮುರಿತ ನಿರೋಧಕ ಗುಣ ಇದರ ಇನ್ನೊಂದು ವಿಶಿಷ್ಟತೆ. ಯಾವುದೇ ವಜ್ರದಲ್ಲಿ 4 ವಿಭಿನ್ನ ದಿಕ್ಕುಗಳಲ್ಲಿ ಪರಿಪೂರ್ಣ ನೇರ ಸೀಳಿಕೆಗಳು (ಕ್ಲೀವೇಜ್) ಇರುತ್ತವೆ. ಇವುಗಳ ಗುಂಟ ಮಾತ್ರ ವಜ್ರವನ್ನು ಸೀಳಬಹುದು. ನಿರ್ದಿಷ್ಟ ಸಮತಲಗಳಲ್ಲಿ ಸಾಪೇಕ್ಷವಾಗಿ ಕಡಿಮೆ ರಾಸಾಯನಿಕ ಬಂಧಗಳಿರುವುದ ರಿಂದ ಅವು ದುರ್ಬಲವಾಗಿರುವುದೇ ಇದಕ್ಕೆ ಕಾರಣ. ವಜ್ರದ ಮೇಲ್ಮೈಗೆ ಮೇಣ ಮತ್ತು ಗ್ರೀಸ್ ಅಂಟಿಕೊಳ್ಳುವುದಾದರೂ ನೀರು ಅದನ್ನು ಒದ್ದೆ ಮಾಡುವುದಿಲ್ಲ. ವಜ್ರದ ಸಾಂದ್ರತೆ ಘನ ಸೆಂಟಿಮೀಟರಿಗೆ 3.51 ಗ್ರಾಮ್. ಅನೂಹ್ಯ ಉಚ್ಚ ಸಂಮರ್ದದಲ್ಲಿ ವಜ್ರ ರೂಪುಗೊಂಡಿರುವುದನ್ನು ಇದು ಸೂಚಿಸುತ್ತದೆ. ಎಂದೇ, ವಜ್ರವನ್ನು ಕೃತಕವಾಗಿ ತಯಾರಿಸುವದು ಬಲು ಕಷ್ಟ ಮತ್ತು ದುಬಾರಿ. ಆದರೂ ಮಾರುಕಟ್ಟೆಯಲ್ಲಿ ಲಭ್ಯ. 14000 ಸೆ. ತಾಪದಲ್ಲಿ 55000 ಅಟ್ಮಾಸ್ಫಿಯರ್ ಸಂಮರ್ದ ಸೃಷ್ಟಿಸಿದರೆ ವಜ್ರ ತಯಾರಿಸಬಹುದು. ವಜ್ರದ ಉಜ್ಜ್ವಲತೆ ಮತ್ತು ಹೊಳಪು ಅಸದೃಶ. ಉಚ್ಚ ವಕ್ರೀಭವನಾಂಕ (= 2.42) ಮತ್ತು ಪ್ರತಿಫಲನಶೀಲತೆ ಇದಕ್ಕೆ ಕಾರಣಗಳು. 

ಚಿತ್ರ-ವಜ್ರದ-ರಚನೆ

	ಶುದ್ಧ ವಜ್ರಕ್ಕೆ ಬಣ್ಣವಿಲ್ಲ. ಇದು ವಿರಳ ಲಭ್ಯ. ಸಂರಚನ ದೋಷಗಳಿಂದ ಅಥವಾ ಅತ್ಯಲ್ಪ ಪ್ರಮಾಣದಲ್ಲಿ ಬೇರೆ ಧಾತುಗಳ ಸೇರ್ಪಡೆಯಿಂದ ವಜ್ರಕ್ಕೆ ಬಣ್ಣ ಉಂಟಾಗುತ್ತದೆ (ಉದಾ: ನೈಟ್ರೊಜನ್ ನಿಂದ ಹಳದಿ; ಬೋರಾನ್‍ನಿಂದ ನೀಲಿ). ಆಪಾತ ಬಿಳಿಯ ಬೆಳಕನ್ನು ವಜ್ರ ಅಶ್ರಗದಂತೆ ಘಟಕ ಬಣ್ಣಗಳಾಗಿ ವಿಭಜಿಸಬಲ್ಲದು. ಎಂದೇ, ಅದು ಬೆಂಕಿಯಂತೆ ಪ್ರಜ್ವಲಿಸುತ್ತದೆ. ಕೆಲವು ವಜ್ರಗಳಿಗೆ ಸ್ಫುರದೀಪ್ತಿ (ಫಾಸ್ಫರೆಸೆನ್ಸ್) ಅಥವಾ ಪ್ರತಿದೀಪ್ತಿ (ಫ್ಲೂರೆಸೆನ್ಸ್) ಗುಣವೂ ಇರುವುದುಂಟು. ವಜ್ರಗಳು ಸಾಮಾನ್ಯವಾಗಿ ವಿದ್ಯುದ್ವಾಹಕಗಳಲ್ಲ. ಅರೆವಾಹಕ ವಜ್ರಗಳು ವಿರಳಲಭ್ಯ. ಇವು ಉಷ್ಣದ ಅತ್ಯುತ್ತಮ ವಾಹಕಗಳು. ದೇಹಕ್ಕೆ ಒತ್ತಿ ಹಿಡಿದಾಗ ದೇಹದ ಉಷ್ಣವನ್ನು ಬಲು ಬೇಗನೆ ಹೀರುತ್ತವೆ. ಆದ್ದರಿಂದ ಇವನ್ನು ಬರ್ಫ ಎಂದೂ ಕರೆಯುವುದುಂಟು.

	ಭೂಮಿಯಲ್ಲಿ, ಸಾಮಾನ್ಯವಾಗಿ 150 ಕಿಮೀಗಿಂತ ಹೆಚ್ಚು ಆಳದಲ್ಲಿ ಭೂವೈಜ್ಞಾನಿಕ ಪ್ರಕಿಯೆಗಳಿಂದ ವಜ್ರದ ಉತ್ಪತ್ತಿ. ಅತಿ ವಿರಳ ಶಿಲಾಪಾಕದೊಂದಿಗೆ (ಮ್ಯಾಗ್ಮ) ಇವು ಭೂಮಿಯ ಮೇಲ್ಪದರಗಳತ್ತ ಸಾಗುತ್ತವೆ. ಶಿಲಾಪಾಕ ಜ್ವಾಲಾಮುಖಿಯ ರೂಪದಲ್ಲಿ ಹೊರಹೊಮ್ಮುತ್ತದೆ. ಇಂಥ ಜ್ವಾಲಾಮುಖಿಗಳ ಕೊಂಚ ಕೆಳಗೆ ಉಂಟಾಗುವ ಕೆಂಪುಮೂಲಂಗಿ (ಕ್ಯಾರಟ್) ಆಕಾರದ ಕೊಳವೆಯಲ್ಲಿ ತುಂಬಿಕೊಳ್ಳುವ ಜ್ವಾಲಾಮುಖಿಜ ಶಿಲೆಗಳಲ್ಲಿ ವಜ್ರಗಳು ಹುದುಗಿರುತ್ತವೆ (ವಜ್ರಧಾರೀ ಶಿಲೆಗಳಿಗೆ ಕಿಂಬರ್‍ಲೈಟ್, ಲ್ಯಾಂಪ್ರಾಯಿಟ್ ಎಂಬ ಹೆಸರುಗಳಿವೆ). ಕೆಲವು ನಿರ್ದಿಷ್ಟ ಖನಿಜಗಳ ಇರುವಿಕೆಯ ನೆರವಿನಿಂದ (ಉದಾ: ಕ್ರೋಮೈಟ್, ಗಾರ್ನೆಟ್, ಜಿûರ್ಕಾನ್) ವಜ್ರ ನಿಕ್ಷೇಪವಿರುವ ಪ್ರದೇಶವನ್ನು ಅಂದಾಜಿಸಬಹುದು. ಭೂಖಂಡಗಳು ಢಿಕ್ಕಿ ಹೊಡೆದ ಪ್ರದೇಶಗಳಲ್ಲಿಯೂ ವಜ್ರ ಉತ್ಪತ್ತಿಯಾಗಿ ರುವುದಕ್ಕೆ ಪುರಾವೆಗಳಿವೆ. ಲಭ್ಯ ನೈಸರ್ಗಿಕ ವಜ್ರಗಳು 100 ಮಿಲಿಯನ್ -3 ಬಿಲಿಯನ್ ವರ್ಷ ವಯಸ್ಸಿನವು. ವಜ್ರ ಗಣಿಗಾರಿಕೆಗೆ ದಕ್ಷಿಣ ಆಫ್ರಿಕ ಪ್ರಸಿದ್ಧವಾಗಿದ್ದರೂ 6-17ನೆಯ ಶತಮಾನದಲ್ಲಿ ಭಾರತದಲ್ಲಿ, 18ನೆಯ ಶತಮಾನದಲ್ಲಿ ಬ್ರಜಿûಲ್‍ನಲ್ಲಿ ವಜ್ರದ ಗಣಿಗಾರಿಕೆ ಇತ್ತು. 20ನೆಯ ಶತಮಾನದ ಅಂತ್ಯದ ವೇಳೆಗೆ ಸು. 25 ರಾಷ್ಟ್ರಗಳಲ್ಲಿ ವಜ್ರ ಗಣಿಗಾರಿಕೆ ಇತ್ತು. ಆಸ್ಟ್ರೇಲಿಯ, ಬೋಟ್ಸ್‍ವಾನ, eóÁಯ್ರೆ, ದಕ್ಷಿಣ ಆಫ್ರಿಕ, ರಷ್ಯ, ಅಂಗೋಲ ಮತ್ತು ನಮೀಬಿಯ ರಾಷ್ಟ್ರಗಳು ಜಗತ್ತಿನ ವಜ್ರ ಬೇಡಿಕೆಯ ಸೇಕಡ 80ರಷ್ಟನ್ನು ಪೂರೈಸುತ್ತಿದ್ದುವು. ಗಣಿಗಾರಿಕೆಯಿಂದ ಲಭಿಸುವ ವಜ್ರದ ಸೇಕಡ 75 ಭಾಗ ಔದ್ಯಮಿಕ ಅನ್ವಯಗಳಿಗೆ ಬಳಕೆ, ಉಳಿದದ್ದು ಆಭರಣ ಉದ್ಯಮಕ್ಕೆ.

	ಕಚ್ಚಾ ವಜ್ರವನ್ನು ಕುಶಲಿತಜ್ಞರು ಆಭರಣಯೋಗ್ಯ ವಜ್ರವಾಗಿ ಸಂಸ್ಕರಿಸುತ್ತಾರೆ. 4 ಅಗಳು ಎಂದೇ ಪ್ರಸಿದ್ಧವಾಗಿರುವ 4 ಗುಣಗಳನ್ನು ಆಧರಿಸಿ ಆಭರಣ ವಜ್ರದ ಬೆಲೆ ನಿಗದಿ. 1 ತುಂಡರಿಕೆ (ಕಟ್):ವಜ್ರದ ಆಕಾರ, ಮುಖಗಳ ಅಳವು ಮತ್ತು ಒಪ್ಪ. 2 ಶುಭ್ರತೆ (ಕ್ಲ್ಯಾರಿಟಿ): ದೋಷರಾಹಿತ್ಯ ಸೂಚಕ. ಬಹುತೇಕ ವಜ್ರಗಳಲ್ಲಿ ದೋಷಗಳಿರುತ್ತವೆ. ದೋಷರಹಿತದಿಂದ ಮೊದಲ್ಗೊಂಡು ದೋಷಭರಿತದ ತನಕ ವಿವಿಧ ಮಟ್ಟದ ಶುಭ್ರತೆಯ ವಜ್ರಗಳು ಲಭ್ಯ. 3 ಕ್ಯಾರಟ್: ವಜ್ರದ ತೂಕದ ಏಕಮಾನ ಕ್ಯಾರಟ್ (1 ಕ್ಯಾರಟ್=0.20 ಗ್ರಾಮ್). 4 ಬಣ್ಣ (ಕಲರ್): ವರ್ಣರಹಿತ, ಹೆಚ್ಚುಕಮ್ಮಿ ವರ್ಣರಹಿತ ವಜ್ರ ಅತ್ಯಮೂಲ್ಯ. ನೀಲಿ, ಕೆಂಪು, ಪಾಟಲ ಮತ್ತು ಊದಾ ಬಣ್ಣದವೂ ದುಬಾರಿಯವು. ಉಳಿದವು ಅತಿ ಮಸಕಾದ ಹಳದಿ, ಬಲು ನಸುಹಳದಿ, ನಸುಹಳದಿ ಇತ್ಯಾದಿಯಾಗಿ ವರ್ಗೀಕರಿಸಬಹುದಾದ ಸಾಮಾನ್ಯ ವಜ್ರಗಳು.

	ಅತ್ಯಂತ ದೊಡ್ಡ ವಜ್ರ ಎಂಬ ಹೆಗ್ಗಳಿಕೆ ದಕ್ಷಿಣ ಆಫ್ರಿಕದ ಪ್ರೀಮಿಯರ್ ಗಣಿಯಲ್ಲಿ ಸಿಕ್ಕಿದ (1905 ಜನವರಿ 26) ಕಲ್ಲಿನ್ಯಾನ್ ಎಂಬ 3106 ಕ್ಯಾರಟ್ ತೂಕದ ವಜ್ರದ್ದು. ಇದನ್ನು 105 ಆಭರಣ ವಜ್ರಗಳಾಗಿ ಸಂಸ್ಕರಿಸಲಾಯಿತು. ಇವುಗಳ ಪೈಕಿ 530.20 ಕ್ಯಾರಟ್‍ನ ಕಲ್ಲಿನ್ಯಾನ್ 1 ಅಥವಾ ಸ್ಟಾರ್ ಆಫ್ ಆಫ್ರಿಕ ಬ್ರಿಟಿಷ್ ರಾಜದಂಡದಲ್ಲಿದೆ. 273.85 ಕ್ಯಾರಟ್‍ನ ಸೆಂಟಿನರಿ, 546.67 ಕ್ಯಾರಟ್‍ನ ಗೋಲ್ಡನ್ ಜೂಬಿಲಿ, ಕಾಣೆಯಾದ 24 ಕ್ಯಾರಟ್‍ನ ಗ್ರೇಟ್ ಮೊಗಲ್, ಬ್ರಿಟಿಷ್ ರಾಜಮುಕುಟದಲ್ಲಿ ಇರುವ 105.6 ಕ್ಯಾರಟ್‍ನ ಕೋಹಿನೂರ್, ರಷ್ಯದ ಕ್ರೆಮ್ಲಿನ್‍ನಲ್ಲಿ ಇರುವ 189.6 ಕ್ಯಾರಟ್‍ನ ಆರ್ಲೋವ್ ಕೆಲವು ಪ್ರಪಂಚವಿಖ್ಯಾತ ವಜ್ರಗಳು.				
								(ಎ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ